Saturday, July 22, 2017

ಮಳೆ

ಮನದ ಭಾವಗಳು
ಸುರಿವ ಮಳೆಯಂತೆ..

ಒಮ್ಮೆ ಹಿತವಾಗಿ 
ತಂಪೆರೆವ ಆಟ
ಮತ್ತೊಮ್ಮೆ ಶನಿಯಾಗಿ
ನಿರಂತರ ಕಾಟ

ಒಮ್ಮೆ ಇರುವ ಕೊಳಕೆಲ್ಲ
ತಟ್ಟನೆ ಅಗೋಚರ
ಮತ್ತೊಮ್ಮೆ ಊರ ರಾಡಿಯೆಲ್ಲ
ಅಂಗಳದಿ ಗೋಚರ

ಒಮ್ಮೆ ಪ್ರಶಾಂತ
ಸಂತನಂತೆ
ಮತ್ತೊಮ್ಮೆ ಪ್ರಚಂ‍ಡ
ಪ್ರಳಯದಂತೆ  


‍ಹೊರಗೆ ಬಿಡದ ಮಳೆ
ಒಳಗೋ  ಪ್ರವಾಹದ ಹೊಳೆ‍ !‍

Thursday, January 30, 2014

ಇದ ನೋಡು ,ಅದ ನೋಡು
ಬಿಡದೆ ಬಡಿದಾಡು ..
ಗೂಟವೊಡೆದಿರುವೆನು  ಇಲ್ಲೇ .
ಇಲ್ಲೇ ಇಲ್ಲೇ ಇರುವುದೆಲ್ಲ
ತಾನು ತನ್ನದೇ ಎಲ್ಲ  !!!Sunday, January 26, 2014

ಹಾರಲಿದೆ ಹಂಸ
ಒಂಟಿಯಾಗೇ ...
ಹಂಸ ಹಾರಲಿದೆ !
ಜಗದ ಜಾತ್ರೆಯೋ
ಒಣ ನೋಟವಾಗಿ....!!

ಮರದಿ ಎಲೆಯೊಂದು
ತಾ ಬೀಳಲು ,
ಸುಯ್ಯನೆ ಗಾಳಿಯು
ಒಡನೆ  ಬೀಸಲು
ಬೀಳುವುದೆಲ್ಲೋ  ?
ಅರಿಯದಂತಿರಲು ,

ಇನ್ನಾರ ಅಪ್ಪಣೆ
ಮತ್ತಾರ ಚಾಕರಿ
ಕಾಲ ತಾ ಕೈ ಬೀಸಿರಲು ..
ಕಾಲನ ಭಂಟರೋ
"ಬಲ"ವಂತರು ..
ಅವನೊಡನಾಟ
ಹೆಣ-ಗಾಟ !!

ದಾಸ ನಾ ಕಬೀರ, ಅವನ
ಗುಣ ಗಾನ ಮಾಡುವೆ ,
ಪಡೆದೆನೋ ಪರಮಪದವ ..
ಗುರು ಮಾಡಿದ್ದು ಗುರುವಿಗಾಯ್ತು
ಶಿಷ್ಯನದೋ ಶಿಷ್ಯನಿಗೆ .

ಹಾರಲಿದೆ ಹಂಸ
ಒಂಟಿಯಾಗೇ ...
ಹಂಸ ಹಾರಲಿದೆ !

ಕುಮಾರ ಗಂಧರ್ವರ ಗಾಯನ , ಕಬೀರರ ಕೃತಿ ಇಂದ ಪ್ರೇರಿತವಾದ ಒಂದು  ಪ್ರಯತ್ನ

http://youtu.be/kY2k0JcfByg

Thursday, January 17, 2013


ನಾನು ನೀನು ಬೇರೆ ಏನು ?
ನಾನೇ ನೀನು, ನೀನೇ ನಾನು
ಎರಡಾಗಿರಿಸಿರುವುದೊಂದೇ
ಅಹಮ್ಮು..!!


Thursday, July 21, 2011

ರುಜು

ಆ ಮಾಯಾ ಛಾಯೆಯಲಿ
ಈ ಮೋಹ ಪಾಶದಲಿ
ನಲಿವು ನೋವಿನಲಿ
ಏಳು ಬೀಳಿನಲಿ..
ಮರೆಯಾಗಿತ್ತೋ ಮರ್ಮ ?
ಕಲಿಸಲೆಂದೋ ಜೀವನಧರ್ಮ ..!!!

ದಿನಗಳುರಳಿ,
ಋತುವು ಮರಳಿ..,
ಹೊಸದು ಬರಲಿ
ಹಳತು ಅಗಲಿ..,
ಗೂಢ ನವಿರೆಳೆಯ ಚರಕ.. !
ತಿರುಗಿತದೋ ಚಕ್ರ!!

ಬರಲಿ ಬರಲಿ ಮತ್ತೆ ಬರಲಿ..
ಒಲವ ಸುಧೆಯಲಿ,
ಕಂಗೆಟ್ಟ ಕಡೆಯಲಿ..
ಬಟ್ಟ ಬಯಲಲಿ,
ತುತ್ತ ತುದಿಯಲಿ...
ಮತ್ತೆತ್ತ ನೋಡದಂತ ಅರಿವು....
ನಿತ್ಯ... ನಮ್ಮಲಿ ... !!!

ಜಯಂತಬಾಬು

Saturday, July 16, 2011

ಹೀಗೆ ಒಂದು ಕವನ

ಸರಿ ನೋಡೋಣ ಬನ್ನಿ..
ಹಕ್ಕಿಗಳ ಹಾರಾಟ
ತರಕಾರಿ ಮಾರಾಟ
ಹಾಗೇ ನಡೆದಲ್ಲಿ ..
ಅವರೂ ಸಿಗಬಹುದು
ನೋಡಿ ನಗಬಹುದು
ನಿಲ್ಲಿಸಿ ನುಡಿಯಬಹುದು
"ಹೇಗಿದ್ದೀರಿ , ಎಲ್ಲ ಕ್ಷೇಮವೇ ?"
ನಿಮ್ಮ ಮಾತು ದೂರಾಗುವ ಮುನ್ನ
ಅವರು ಪಕ್ಕದವರೊಡನೆ ಏನೋ
ಹೇಳಿದ್ದು , ಕಿಸಿದು ನಕ್ಕಿದ್ದೂ
ಕಿವಿಗೆ ಬಿದ್ದರೂ..
ಬೀಳದಂತೆ ನಡೆಯೋಣ ..
ಅಲ್ಲೇ ಹಾಗೆ ಬೈಟು ಕಾಪಿ
ಹೀರುವಾಗ, ಎಂದಿನಂತೆ
ಅಂಗಡಿ ರಾಜು ಕೇಳಿಯಾನು
ಕೇಳಿದ್ರ ಸಾರ್ ಎಡ್ಡಿ ಸಮಾಚಾರ ?
ಸಣ್ಣದೊಂದು ನಗೆ ಜೊತೆಗೆ
"ಏ ಅದು ಬಿಡಿ.. ಇದ್ದದ್ದೇ "
ಅಂದುಬಿಡಿ..
ನಿಮ್ಮ ಪೇಪರ್ ಕೊಳ್ಳಿ,
ಬೇರೆಯದನ್ನು ಅಲ್ಲೇ ಓದಿ.

ಮತ್ತೊಂದು ದಿನಕ್ಕೆ ಸಜ್ಜಾಗಿ
ದಿನವಿಡೀ ಆಫೀಸು ಟ್ರಾಫಿಕ್ಕಿನಲ್ಲಿ
ನುಜ್ಜು ಗುಜ್ಜಾಗಿ ,
ಸಂಜೆ ಇಲ್ಲೇ ಕುಳಿತು ಹರಟೋಣ
ಅಂಗಡಿ ಬಾಗಿಲ ಹಾಕುವ ತನಕ..
ಮತ್ತೊಂದು ದಿನಕ್ಕೆ ತೆರೆ ಎಳೆಯುತ....

ಜಯಂತಬಾಬು

Friday, July 15, 2011

ಆತಂಕ

ಯಾವ ನೋವೋ ,ಯಾರ ಸಾವೋ ?
ಇಲ್ಲವೆನ್ನುವೆ,ನಿರಾಕರಿಸುವೆ
ದುಃಖ ತಾ ಅಳುವವಗೆ !

ಉಂಡು ಮಲಗುವೆ
ಗೊರಕೆ ಹೊಡೆಯುವೆ
ಕನಸೂ ಕಾಣುವೆ.

ಕನಸಲೊಂದು ಕಳವಳ!!
ಎದೆಯ ಮೇಲೆ ಕಲ್ಲು
ಕಲ್ಲ ಮೇಲೋ ಕರಿಯದೊಂದು .... !!

ಕತ್ತು ಹಿಚುಕಿ ಕತ್ತಲಾಗಿ
ನಡೆದೇ ನಡೆದೆ ಕೈ ಚಾಚಿ
ತಗುಲಿತೊಂದು ದೇಹ !!

ತಣ್ಣಗಿದೆ,ನೆತ್ತರಿದೆ !
ಬೆವೆತು ಓಡಲು
ಎಡವಿದೆ .. ನಡುಗಿದೆ
ಕೈಯ ರಕ್ತ ..ಎತ್ತೆತ್ತಲೂ ಪ್ರೇತ.!!
-ಜಯಂತಬಾಬು

Friday, January 07, 2011

ಈ ಚಳಿಗಾಲದ ದಿನಗಳೇ ಹೀಗೆ.
ಸುರಿಯುವ ಹಿಮ
ಕೊರೆಯುವ ಚಳಿ
ಮತ್ತದೇ ಜಡ್ದು

ಮೈ ಕೊಡವಿ
ಮೇಲೆದ್ದರೂ
ಮನಕೆ ತಿಳಿ
ಹೇಳಿದರೂ
ತಲೆಯಲ್ಲಿ ಅದೇ ಸದ್ದು.

ಎಲ್ಲ ಮಲಗಿರುವಾಗ
ಹೇಗೆ ನಾ ಏಳಲಿ
ಬರಲೇಳು ವಸಂತ
ಮತ್ತೊಂದು ದಿನಕ್ಕಂತ.
-ಜಯಂತ

Wednesday, September 15, 2010

ತಿರುಕ

ಇಲ್ಲೊಬ್ಬ ತಿರುಕ,
ಕಂಡರೆ ಮರುಕ
ಸೂರೊಂದಿಲ್ಲವಗೆ.

ಮಳೆಗಾಲದಿ ರೈನ್ ಕೋಟ್
ಚಳಿಗಾಲದಿ ವಿಂಟರ‍್ ಕೋಟ್
ಕೈಲ್ಲೊಂದು ಸಿಗರೇಟ್
ಬಾಗಿದ ದೇಹ,ಬಗ್ಗಿದ ನೋಟ

ನಡೆಯುತ್ತಾನೆ ಇಲ್ಲಿಂದಲ್ಲಿ
ನೋಡಿದ್ದುಂಟು ಅಲ್ಲಿ ಇಲ್ಲಿ
ತಿನ್ನುವ ಅಂಗಡಿಗಳಲಿ
ಮಳಿಗೆಗಳ ಬಗಲಿನಲಿ

ಒಂದೊಮ್ಮೆ ಅನಿಸಿತ್ತು
ಪಾಪ!
ಮತ್ತೆ ಮತ್ತೆ ಹಾದಿಬದಿಯಲಿ
ನಡೆವ ಇವನ ಕಂಡಾಗ
ನನ್ನ ಆಲೋಚನೆ ಕಡೆದಾಗ
ಅನಿಸಿದ್ದು " ಆಹಾ! ಜೀವನ " !!

Wednesday, August 18, 2010

ಒಂದು ಹನಿಗವನ

ಬಾ ಸಖೀ,ಬಾ...
ನನ್ನ ಬಣ್ಣದ ಮಾತಿನಲ್ಲಿ
ಬಂದಿಸೆನು
ಮೋಡಿಯ ಮಾಡಿ
ಸಿಲುಕಿಸೆನು
ನೀ ಅರಿಯದ ಪದಗಳಲಿ
ವಂಚಿಸೆನು
ಬಾ...ಬಾ...ನೀ ನೀನಾಗಿ
ಕಾದಿರುವೆ ನಾ ನಾನಾಗಿ.

Saturday, August 07, 2010

ಕ್ಷಮೆ ಇರಲಿ..

ಕ್ಷಮೆ ಇರಲಿ..
ನಿಮ್ಮಂತೇ ಮಾನವನೇ..!

ಅಡಿಗಡಿಗೆ ಎಡವಿ ಏಳುವೆ
ನುಡಿಗಳಲಿ ತೊದಲುವೆ
ಹಿಡಿದ ಕೈಗಳ ಒತ್ತುವೆ
ಮಿಡಿವ ಮನಕೆ ತುಡಿಯದಿರುವೆ,

ತಪ್ಪೆಂದು ತಿಳಿದೂ.. ತಿದ್ದಿಕೊಳ್ಳಲಾಗದೆ!
ಸರಿಯೆಂಬುದೆಲ್ಲ ಅನುಸರಿಸಲಾಗದೆ ,
ಪಡೆದ ಸುಖದಿ ತೃಪ್ತಿಯಾಗದೆ
ಕಳೆದದ್ದೇನೋ ? ಹುಡುಕಲಾಗದೆ

ಕ್ಷಮೆ ಇರಲಿ..
ನಿಮ್ಮಂತೇ ಮಾನವನೇ..!

ಯಾಂತ್ರಿಕ ಬದುಕು

ಉತ್ತರಗಳೇ ಸಿಗದ ನೂರು
ಪ್ರಶ್ನೆಗಳು
ನಿಶಿ ಹಗಲೂ ಬಿಡದೇ
ಕತ್ತರಿಸುತ್ತಿದ್ದರೂ
ಬೆಳಗಿನ ಆ ಹೊನ್ನ
ಕಿರಣವದೇನೋ
ಹೊಸ ಹುರುಪನಿತ್ತು
ಗೊಂಬೆಗೆ ಕೀ ಕೊಟ್ಟಂತೆ
ನಡೆಸಿದೆ..
ಓಡಿಸಿದೆ.

ಜೀವಸೆಲೆ

ಚಿಗುರೆಲೆಗಳ ನಡುವೆ
ಹೂವೊಂದು ನಕ್ಕು
ಬಿಸಿಲಿಗೆ ಎದೆ ಚಾಚಿ
ಮಳೆಗೆ ನಸು ನಾಚಿ
ಚಳಿಯೊಡನೆ ಚರಮಗೀತೆ
ಯ ಹಾಡಿ...
ಬಲಿತ ಎಲೆಗಳೂ
ನೆಲವನ್ನಪ್ಪಿ
ಬೆತ್ತಲಾಗಿ ನಿಂತ
ಮರ
ಮತ್ತೆಲ್ಲಿಯ ಜೀವ ಸೆಲೆ ?

ಮತ್ತೊಂದು ಕಾಲಚಕ್ರಕೆ
ಸಜ್ಜಾದ ಮರಕ್ಕೆ ತನ್ನದೇ ನೆಲೆ.

Monday, July 26, 2010

ತಾರೆ


ಮನೆಯ ಛಾವಣಿಯಲಿ
ಚಂದ್ರ,ತಾರಾಮಂಡಲ.
ಬೆನ್ನ ಮೇಲೆ ಮಲಗಿ ನೆನೆದೆ,
ಯಾವ ತಾರೆ ನನ್ನದು ??
ಎಲ್ಲೋ ಕೇಳಿದಂತೆ ಭಾಸ
ಸತ್ತು ತಾರೆಯಾಗುವರಂತೆ
ನಾ ಸತ್ತು ತಾರೆಯಾದರೆ,
ಎಲ್ಲಿ ಕಾಣುವೆ,ಹೇಗೆ..?
ನನ್ನ ಅಮ್ಮನ ಅಮ್ಮ,ಅಪ್ಪ
ಅಪ್ಪನ ಅಪ್ಪ,ಅಮ್ಮ,ಒಂದಷ್ಟು ಬಳಗ..
ಯಾವ ತಾರೆಗಳಾಗಿಹರು,
ಕಾಣರೇಕೊ...?
ಮೊನ್ನೆ ಜಾರಿ ಬಿದ್ದ ಬೆಳಕ ತುಂಡು
ಅದ್ಯಾರದು?
ಭುವಿಯ ಮೇಲೆ ಆಸೆ ಕರಗದೆ..

Wednesday, July 21, 2010

ನಿರಾಳ


ಆ ಕಾಳರಾತ್ರಿಯಲಿ
ನಿಟ್ಟುಸಿರ ನೋಟದಿ
ಬಾನಂಗಳವೂ ಕಪ್ಪು.

ಕಳೆದ ಕ್ಷಣಗಳು,
ಕರಾಳವೆನಿಸಿಹೆ
ಮಿಂಚಿತೊಂದು ಹುಳು,

ಹಗುರಾದೆ ಹಾಗೆ...

Sunday, June 20, 2010

ಪರಕೀಯ


ನಾ ಪರಕೀಯನಾದದ್ದು
ದೇಶದಿಂದಲ್ಲ,
ಭಾಷೆಯಿಂದಲ್ಲ.
 
ನಿಜವೆಂದು ನಂಬಿದ,
ನನ್ನಿಂದ !!

Monday, April 12, 2010

I Love You


I Love You
Originally uploaded by jayanthababu

Thursday, May 07, 2009

ಬರೆಯುವ ತಲ್ಲಣ

ಬರೆಯುವ ತಲ್ಲಣ


ಇಂದು,ನೆನ್ನೆಯದೇನಲ್ಲ.
ಕಂಡದ್ದು,ಕಾಣದ್ದು
ಅರಿತೂ ಅರಿಯದ್ದು
ಪದಗಳಾಗದೇ ಅವಿತಿದ್ದು.

ಭಾವವೊಂದು ಬೆಳೆವುದು,
ನನ್ನೆದೆಯ ಬಗೆದು
ಕವನವಾಗೆ ನಲಿವುದು
ಕನವರಿಸಿದ ಕ್ಷಣಗಳೋ..?

ನೂರು ಹೇಳ ಹೊರಟರೂ
ನುಡಿದದ್ದೊಂದೆ.
ಅದೇ ತುಮುಲದ
ಮತ್ತೊಂದು ಮಗ್ಗಲು !

Monday, September 15, 2008

ಏಕಾಂತ

ಏಕಾಂತವು
ಒಂಟಿತನವಲ್ಲ.
ಕಾಂತೆಯೊಡನಿದ್ದು
ಏಕಾಂತವುಂಟು.

ದಂತ ಗೋಪುರವೋ
ಸಂತನಂತಿರುವುದೋ
ಎಂದೇನೂ ಇಲ್ಲ.

ತೆರೆದುಕೊಳ್ಳದಂತ
ಹೊರಗಾಗಿ ನಿಲ್ಲುವಂತ
ಬಚ್ಚಿಟ್ಟದ್ದಲ್ಲ.

ಕಂಡದ್ದೆಲ್ಲ ಒಂದು,
ಕಾಣದ್ದೂ ಒಂದು
ಅ-
ನೇಕ
ವಿಲ್ಲದ "ಏಕಾಂತ".

ಆನಂದ

ದಿಗಂತದತ್ತ ನೆಟ್ಟ ನೋಟವ
ಅಷ್ಟು ಸಡಿಲಿಸಿ
ಇತ್ತ ನೋಡಲು
ಮತ್ತದೇ ಆನಂದ....

ತಿಳಿ ನೀರ ಕೊಳ
ಹಾರುವ ಹಕ್ಕಿ
ಹಸಿರ ತೂಗುವ ಮರ ಗಿಡ..
ನಗುವ ಕಂದ
ನಲ್ಲೆಯ ಒಲ್ಮೆ
ಅಲ್ಲು ಇಲ್ಲು ಎಲ್ಲೆಲ್ಲೂ
ತನ್ನತನವೇ ತೋರುವ....
ಆನಂದ.

Saturday, April 26, 2008

ಪ್ರಶ್ನೆಗಳು - ಕವನ

ಇಲ್ಲೇ.. ಹೀಗೆ.. ಇರುತ್ತಿದ್ದೆ
ನೀ ಬರುವ ಮುನ್ನ.
ನಾನು,
ನನ್ನೊಡನೆ
ಉತ್ತರವಿಲ್ಲದ ಪ್ರಶ್ನೆಗಳು.

ನೀ ಬಂದವಳೇನೂ
ಮಿಂಚ ತರಲಿಲ್ಲ,
ಮಳೆಯ ತರಲಿಲ್ಲ.
ಕನಿಷ್ಠ... ತಂಪು
ಗಾಳಿಯಾದರೂ ಬೇಡವೇ ?
ಹೋಗಲಿ ಬಿಡು,
ಜೀವ-ಜೀವನಕ್ಕೆ
ಬೇಕಲ್ಲವೇ
ಒಲವು.
ಒಲವ ಹೊನಲು
ಹರಿದರೂ..,
ಬಗೆ
-ಹರಿಯಲಿಲ್ಲ
ಕಾಡುವ ಪ್ರಶ್ನೆಗಳು. ?

ನೀನೇ ಉತ್ತರವಲ್ಲವೆನಿಸಿ
ಮತ್ತೆ ಹುಡುಕುತಿರಲು..
ಗೋಡೆಗೊರಗಿ ಕೂತ
ನನ್ನ.. ಮುಂದೆ
ನಗುತ ನೀ ನಿಂತೆ.

Wednesday, March 05, 2008

ಬಯಕೆ

ಹಾದು, ಹೋದ ದಿನಗಳ
ನೆನೆಯುತ ಕುಳಿತವಗೆ
ಗಕ್ಕನೆ ಹೊಳೆದದ್ದು !
ನಡೆದನಲ್ಲ... ಬಹು ದೂರ .

ಬದಲಾದ ಕಾಲ, ದೇಶ
ವೇಷ - ಭಾಷೆ.
ಬದಲಾಗದ ಬಯಕೆ.
ಎಷ್ಟಿದ್ದರೇನು ?
ಬೇಕೆಂಬ ಹವಣಿಕೆ.

ಪಣ ತೊಟ್ಟು ನಿಂತೆ.
ಮೆಟ್ಟಿ ನಿಲ್ಲುವೆ..
ಇದರ ಸೊಲ್ಲಡಗಿಸುವೆ!
ನನ್ನ ಅಡಿಯಾಳಾಲ್ಲವೇ ?
ನನ್ನನಾಡಿಸುವುದುಂಟೇ ?

"ನನ್ನ" .......?
ಮರೆತಿದ್ದೆ..ನನ್ನ ಮನೆ,
ನನ್ನ ಕೆಲಸ, ನನ್ನ ಸಂಸಾರ
ನಾನು.., ನನ್ನ ಬಯಕೆ ,
ಮೆಟ್ಟಿದರಾದೀತು..ಮತ್ತೊಮ್ಮೆ !

Tuesday, February 12, 2008

ಭಾವಗಳು

ಅಗೊಮ್ಮೆ ಈಗೊಮ್ಮೆ ಬಂದು
ಬಿತ್ತಿ ಹೋಗುತ್ತಿದ್ದ ಭಾವಗಳೇಕೋ
ಮುನಿಸಿಕೊಂಡಂತಿವೆ.

ಇಲ್ಲವೆಂತಿಲ್ಲ, ಬರದೇ ಇರದಂತಿಲ್ಲ !
ಹೇಳಿಯೇ.... ಬರುತ್ತವೆ.
ಬಂದು ಕೂರುವ ಮುನ್ನವೇ
ತಮ್ಮೊಳಗೆ ನಾಲ್ಕು ಮಾತನಾಡಿ
ನನಗೊಂದು ಮಾತ ಹೇಳದೆ
ನಿರ್ಗಮಿಸುತ್ತವೆ.

ಬಿತ್ತುವ ಮುನ್ನ ಉಳುವ ನೆಲವ
ನೋಡುವಂತೆ..
ನನ್ನೆದೆ ಹೊಲವನ್ನೊಮ್ಮೆ ಹೊಕ್ಕು
ಬರಡೆಂದೋ ?,ಫಸಲು ಕಾಣದೆಂದೋ ?
ಹಸನಾದ ನೆಲವನರಸಿ ಹೊರಟಂತಿವೆ.


ಪ್ರೇರಣೆ : "ಬನ್ನಿ ಭಾವಗಳೇ, ಬನ್ನಿ ನನ್ನೆದೆಗೆ .."

Friday, December 28, 2007

ಒಂದು ಕವನ

ನಿನ್ನ ನೆನಪೇ ..
ಉಸಿರೆಂದು,
ಹಸಿರೆಂದು,
ಹಸಿ,ಹುಸಿಯೇ!
ಗುನು-ಗುನಿಸಿ..
ಜಾರಿದೆ ನಿದಿರೆಯ
ಮಡಿಲಿಗೆ.

ಕನಸಿನಲ್ಲೊಂದು
ರೂಪ..,
ನಿನ್ನದೇ
ಪ್ರತಿ-ರೂಪ.
ಕದ್ದು ಕುಳಿತಿಹುದೋ
ಎಲ್ಲ ಚೆಲುವು..?
ನನ್ನಾಕೆ ಮೊಗವ
ಹೊದ್ದು ತೋರುವುದೋ?
ಸೊಬಗು.
ಕನ-
ವರಿಸಿ..,
ಹಿತದೇ ಕಂಪಿಸಿದೆ.