Wednesday, March 21, 2007

ಜಯಂತಣ್ಣನ ರಗಳೆ- ಭಾಗ 9


ತುಂಬಾ ದಿನ ಆಯ್ತಲ್ವ ರಗಳೆ ಬರೆದು.. ಅದೆನೋ ಮಹೂರ್ತ ಕೂಡಿ ಬಂದಿರಲಿಲ್ಲ.ಮೊನ್ನೆ ಡಲ್ಲಾಸ್ ಗೆ ಬಂದೆ..ಮನೆಯಲ್ಲೇ ಕೂತು ಬೆಚ್ಚಗೆ ಮಾಡ್ತ ಇರುವಾಗ ನೆನಪಾಗಿದ್ದು..ಇಷ್ಟು ದಿನ ಬರಿ ಕವನ ಕವಿತೆಗಳನ್ನೇ ತುಂಬಿ ನಿಮ್ಮ ತಲೆ ಚಿಟ್ಟು ಹಿಡಿಸ್ತಾ ಇರೋದು. " ಕಾಲಾಯ ತಸ್ಮೈ ನಮಃ " ಕಾಲಕ್ಕೆ ತಕ್ಕಂತೆ ಎಲ್ಲ ಕೂಡಿ ಬರುತ್ತೆ.

ಇಲ್ಲಿಗೆ ಬರುವ ಮುನ್ನ ಲಂಡನ್ನಿನ ಭೇಟಿ..ಅಧ್ಬುತವಾದ ಊರು,ಸುತ್ತಮುತ್ತಣ ಪರಿಸರ,ವ್ಯವಸ್ತಿತ ಜೀವನ.ಇದನ್ನೆಲ್ಲ ಮೀರಿ ನನ್ನ ಸೆಳೆದದ್ದು ಅಲ್ಲಿಗೆ ಹೋಗುವಾಗ ಮತ್ತು ಅಲ್ಲಿಂದ ಬರುವಾಗ ವಿಮಾನದಿಂದ ಕಂಡ ಭಾನು,ಭೂಮಿ.ಕೆಳಗೆ ನಿಂತು ನೋಡುವಾಗ ಮೋಡಗಳು ಎಷ್ಟೊಂದು ರಹಸ್ಯಮಯವಾಗಿ ತೋರುತ್ತವೆಯೊ ಅಷ್ಟೆ ಕುತೂಹಲ ಅವುಗಳ ಮೇಲಿಂದ ನೋಡುವಾಗಲು ಉಳಿಸಿಕೊಂಡಿರುತ್ತವೆ.ಸಾವಿರಾರು ಅಡಿ ಎತ್ತರದಿಂದಲೇ ಊರು,ಕೇರಿ,ಹಳ್ಳ,ಕೊಳ್ಳ ಎಲ್ಲ ಒಂದು ಬಿಂದುವಾಗಿ ಕಾಣುವಾಗ ಇನ್ನು ಎತ್ತರದಲ್ಲಿ ಹೇಗಿರಬಹುದೆಂದು ಊಹಿಸದೇ ತಪ್ಪದು.ಇದರಿಂದೆಲ್ಲ ಪ್ರೇರಿತನಾಗಿ ಈ ಎರಡು ಕವನ ಗೀಚಿದ್ದೆ...ನೋಡಿ..ಮತ್ತೆ ಬರ್ತಿನಿ ನೊಡೋಣ ಮುಂದೆ ಯಾವ ವಿಷಯ ಹೆಚ್ಚು ಮನವನ್ನ ಒತ್ತಿ ನಿಲ್ಲುವುದೊ..?

ಸಣ್ಣನೆ ಭೂಮಿ

ಅಲ್ಲಿ.....
ಮೋಡಗಳ ಮೇಲಿಂದ
ಕಾಣಲಿಲ್ಲ
ನಮ್ಮ ಮನೆ,
ಪಕ್ಕದ ಮನೆ
ಕೇರಿ,ಊರು..
ಎಲ್ಲವೂ
ಚುಕ್ಕೆ.
ಒಂದರ ಪಕ್ಕ ಒಂದು,
ಜೋಡಿಸಿಟ್ಟ
ಚುಕ್ಕೆ.
ಇನ್ನು ಮೇಲೆ,
ಚುಕ್ಕೆಗಳೆಲ್ಲಾ ಕೂಡಿ
ಮತ್ತೊಂದು ಚುಕ್ಕೆ.
ತಡೆಯಲಾಗದ ಕಸಿವಿಸಿ
ಬಣ್ಣವಿಲ್ಲ,ಗುಣವಿಲ್ಲ.
ಈ ಚುಕ್ಕೆ ದೂರಾಗೆ
ಮತ್ತೊಂದು,
ಮಗದೊಂದು...!!
ಮೇಲೇರಿದೆಂತೆಲ್ಲಾ
ಸಣ್ಣನೆ ಭೂಮಿ,
ಬಾಳು.

ಜಯಂತ್



ದೇವಲೋಕ

ಹೀಗೆ ಕಂಡ ನಾಲ್ಕಾರು
ಪೌರಾಣಿಕ ಚಿತ್ರದ
ನೆನಪು.
ಇಂದ್ರನ ಆಸ್ಥಾನ
ಮೋಡಗಳ ಸ್ಥಾನ.
ಮೇಘದ ಹಿನ್ನೆಲೆ
ರಂಭೆ,ಊರ್ವಶಿ ನಾಟ್ಯ ಸೆಲೆ.
ಕಾಣರೇಕೆ..?

ಅಲ್ಲಿ ಲಂಡನ್ ಮೇಲೆ
ಕೆಳಗೆ ಮೋಡ,ಮೇಲೆ ನಾನು
ಮೇಲೆಲ್ಲ ಅನಂತ
ಎತ್ತ ನೋಡಿದರೂ
ಬರೀ ಮೋಡ.
ನಮ್ಮ ದೇವರು..
ಲಂಡನ್ನಿನಲ್ಲಿ ಹೇಗೆ ಕಂಡಾರು..?
ಬೆಂಗಳೂರಿನಲ್ಲಿ ದಟ್ಟ ಮೋಡ,
ಕಣ್ಣು ಮಂಜು..!
ಇದ್ದರೂ ಕಂಡಿರಲಾರರು.

ರಂಭೆ,ಮೇನಕೆ,ಇಂದ್ರರೇನೋ ದೂರ
ಕಾಣಿಸಬಾರದೇ
ವರುಣ,ವಾಯು,ಇವರಾದರೂ..?
ನನ್ನ ಕಣ್ಣಿಗೆ ಕಾಣರೋ..?
ಸಿದ್ದಿಸಿಕೊಂಡವರಿಗೆ ಕಾಣ್ವರೋ..??

ಜಯಂತ್

2 comments:

Shiv said...

ಜಯಂತ್,

ಲಂಡನ್‍ಗೂ ಭೇಟಿಕೊಟ್ಟು ಬಂದಿರಾ? ಅಥವಾ ಟ್ರಾನ್ಸಿಟ್??

ರಂಭೆ,ಮೇನಕೆ...
ನೀವು ಇದ್ದ ಪುಷ್ಪಕವಿಮಾನದಲ್ಲಿ ಯಾರೂ ಗಗನ ಸಖಿಯರು ಇದ್ದಿಲವೇ :)

ನೀವು ಯಾವ ಸಿದ್ದಿಯ ಬಗ್ಗೆ ಮಾತಾಡ್ತಿದೀರಾ !??

ಜಯಂತ್ said...

ಶಿವ್..

ಇಷ್ಟೊಂದು ಪ್ರಶ್ನೆಗಳು ಒಟ್ಟಿಗೆ ..?? ಮೊದಲನೆ ಪ್ರಶ್ನೆಗೆ ಉತ್ತರ ಕೊಟ್ಟಿದ್ದೇನೆ ಅನಿಸುತ್ತೆ.ಎರಡೆನಯದು ಅವರು ಗಗನಕ್ಕೆ ಸಖಿಯರಲ್ಲವೇ ಸಾರ್.. ಮೂರನೆಯದು - ನಾನು ಮಾತಡ್ತ ಇರೊದು ಅತೀಂದ್ರಿಯ ಶಕ್ತಿಯ ಬಗ್ಗೆ