Thursday, March 01, 2007

ಮಲ್ಲಿಗೆ

ಮೊಳದುದ್ದ ಮಲ್ಲಿಗೆ,
ನನ್ನಯ ನಲ್ಲೆಗೆ..
ಮುಡಿಯಲು ಮೆಲ್ಲಗೆ
ನಾಚುತ ಒಲ್ಮೆಗೆ..

ಮುಡಿಯೇರಿದ ಮಲ್ಲಿಗೆ
ನಾಚಿತೊಮ್ಮೆ ಹಾಗೆ..
ನಲಿಯುತ ತನ್ನ ಪಾಲಿಗೆ
ಬಂದ ಚೆಂದದ ಕೊಡುಗೆ

ಗಮಗಮ ಕಂಪು ಬೀಸದೆ
ಬೀಸಿ ಕರೆಯಿತು ಓಲಾಡುವ ಮನವ
ಮಲ್ಲಿಗೆ ಮೊಗ್ಗೊ,ಹೂವೋ..
ಅರಳಿದೆ ಕಂಡರಿಯದಂತೆ ಮನವು

ಒಂದು,ಎರಡು,ಏಳು ಸುತ್ತೋ..?
ಸುತ್ತುತ್ತಲೇ ಇದೆ ನೆನಪು ನಿನ್ನ ಸುತ್ತ..
ಸೂಜಿಯೋ,ಜಾಜಿಯೋ ಅರಿಯೆ
ಆ ನೋಟದ ಸವಿ ನೋವ ಮರೆಯೆ..

ಕಣ್ಣ ತಪ್ಪಿಸಿ,ಭರದಿ ಚುಂಬಿಸೊ ಪವನ
ನಾಚಿ ನಲುಗುತ,ನುಲಿವ ಮಲ್ಲಿಗೆ
ನನ್ನಾಕೆಗೊಮ್ಮೆ ತಿಳಿಸು,ನನ್ನೊಲವ ಬಣ್ಣಿಸು
ನಿನಗೂ ಅರಿವಿದೆ ಒಲವ ಸೂಸುವ ತಳಮಳವು

ಹೆರಳ ನಡುವೆ ತೂರಿ,ಸಮವಾಗಿ ಸರಿದೂಗುವ
ಮಲ್ಲಿಗೆ,ಮನವನೆಂದೂ ಭರಿಸಲಿಲ್ಲ ನೀ
ನಿನ್ನದಲ್ಲ ಸೆಳೆವ ಸೊಬಗು,ಚೆಲುವು
ಒಪ್ಪಿಕೊ ನಿನ್ನಂದವು,ನೀ ಮುಡಿಯೇರಿದ ನನ್ನೊಲವು

-ಜಯಂತ್..

3 comments:

Shiv said...

ಜಯಂತ್,

ಆಹಾ ! ಮಲ್ಲಿಗೆಯ ಕಂಪೇ ಕಂಪು..
ಸೊಗಸಾದ ಸುವಾಸಿತ ಕವನ

ಜಯಂತ್ said...

ಧನ್ಯವಾದಗಳು ಶಿವ್

chethan said...

ತುಂಬಾ ಸಹಜವಾಗಿ ಬರೀತೀರಿ. ರಸದೌತಣಕ್ಕೆ ದನ್ಯವಾದಗಳು.