Thursday, March 01, 2007

ಸಂಭಾಷಣೆ

ಕವಿಗಳಿಗೆ ನಮಸ್ಕಾರ.
ಧ್ವನಿ ಪರಿಚಿತ,ಆರಾಮ..?
ಏನು ಕಾಣ್ತ ಇಲ್ಲ,ಬಿಜ಼ಿಯೊ
ನಾ ಕವಿಯಾದದ್ದು..
ಇವರಿಗೆ ತಿಳಿದಂತಿದೆ ಮುನ್ನ..
ನಿಮ್ಮದೇ ಪ್ರಶ್ನೆ,ಉತ್ತರವೂ..
ಏನಾದ್ರು ಹೇಳಲೇಬೇಕೆನಿಸಿ
ಬಾಯಿ ತೆರೆವ ಮುನ್ನ..
ಕೆಲಸ ಹೇಗಿದೆ?ಮದುವೆ ಯಾವಾಗ?


ಎಲ್ಲಾದರು ಹಾಯಾಗಿ..
ಆತ್ಮಾವಲೋಕಿಸುವಾಗ,
ಹೀಗೆ ಧುತ್ತನೆ..
ಬಂದಿಳಿಯುವ ಭೂಪರು..
ಇರಬಹುದೇ ಇದೇ ಲೋಕದವರು?

ಕಂಡವರನ್ನ "ಕಂಡವರಂತೆ" ಕಾಣಲುಂಟೇ..?
ಲೋಕಾಭಿರಾಮವೆಂದರೆ ಇರದು ವಿರಾಮ
ಬೈ ಟು ಕಾಫ಼ಿ,ಕೂರಲೊಂದು ಕಟ್ಟೆ
ಮಾತ ಸೆರೆಯಲಿ ಲೋಕವೆಲ್ಲ ಬಲಿ
ರಾಜಕೀಯ,ಇತಿಹಾಸ,ಒಣ ಪ್ರಾಸ
ಅಯ್ಯಯ್ಯೊ..!! ನಿಮ್ಮ ನೋವೋ
ಕರುಣಾಮಯಿ ಕರುಣೆ ಇಡದೇ ಹೋದ..
ಆಹಾ..!!ನಿಮ್ಮ ನಲಿವೋ
ಇಳೆಯಲ್ಲಿರದ ಸೌಭಾಗ್ಯ...!!
ಒಂದರಿಂದ ಇನ್ನೊಂದರತ್ತ ಮಾತು ಹೊರಳಲು
ಕೂತಲ್ಲೇ ಕೂರಲಾಗದೆ ಜೀವ ಚಡಪಡಿಸಲು

ಹೇಗೆ ಹೇಳಲಿ "ನಿಲ್ಲಿಸಿ ನಿಮ್ಮ ಪ್ರತಾಪ"
ನಿಮ್ಮ ಮನಕೆ ಹಿಡಿವ ವಿಷಯ,ನನಗೋ ವಿಷ.
ಇಲ್ಲವೆಂತಿಲ್ಲ..,
ಹಾಗೊಮ್ಮೆ ಹೀಗೊಮ್ಮೆ ನಾನು ಸಮಭಾಗಿಯೇ.
ಹೊತ್ತು ಗೊತ್ತು ನೋಡಬೇಡವೆ..?
ಮೋಡವಿರದ ಮಳೆಯಂತೆ ಸುರಿದು ಸುರಿದು
ನೆನೆಸಿ,ನಿಮ್ಮ ನೆನೆಯದಂತೆ ಸುರಿವುದೇ ?
ಆನೆಯ ಭಾರ,ಇರುವೆಯ ಭಾರ...
ಶಿವನೇ..ಕಾಪಾಡು ನಮ್ಮಂತವರ

ಮುಖಕ್ಕೆ ಹೊಡೆವ ಮಾತು ದೂರ
ನಿಮ್ಮದಾದರೇನು...?
ಎಲ್ಲ ಮನವು ನನ್ನದಂತೆ.
ಅರಿಯಲಾರಿರಿ..,
ನಾ ಹೇಳಲಾರೆ.
ಹಗ್ಗವ ಹರಿಯುವಷ್ಟು ಜಗ್ಗಿ
ಸಿಕ್ಕದಷ್ಟೇ ನಿಮ್ಮ ಪಾಲು..
ಇನ್ನೇನು ಆದರ್‍ಏನು ನೀರುಪಾಲು..?

ಕೇಳುವೆನೆಂದು ಹೇಳುವಿರೋ..?
ಹೌದು..ಕೇಳುವೆ..,
ಕೇಳಿದರೆ ಹೇಳುವೆ.
ಯಾವ ನೆನಪು ಇಲ್ಲ..
ನೀವು ಕೂತು ಕೇಳಿದ್ದು,ನಾ ಹೇಳುತಲೇ ಇದ್ದದ್ದು..
ನಿಮಗಿರುವ ಕಷ್ಟ-ಸುಖ..,
ಪಡೆದು ಬಂದದ್ದಲ್ಲವೇ..?

ಜಯಂತ್

2 comments:

Shiv said...

ಜಯಂತ್,

ಆ ಭೂಪರು ಎಲ್ಲೆಡೆ ಇದ್ದಾರೆ..

>>ಕೇಳಿದರೆ ಹೇಳುವೆ
ಯಾವ ನೆನಪು ಇಲ್ಲ..

ನೆನಪಿಲ್ಲದೆ ಹೇಗೆ ಹೇಳುವುದು?

ಜಯಂತ್ said...

ಇದರ ಅರ್ಥ.. ನೀವು ನನ್ನನ್ನ "ನಿನ್ನ ಕಷ್ಟ ಏನು.." ಎಂದು ಯಾವತ್ತೂ ಕೇಳಿರುವ ಹಾಗೆ ನೆನಪಿಲ್ಲ..