Thursday, May 03, 2007

ಒಂದು ಕಥನ

ಹೀಗೆ ಒಂದು ಕಥೆ
ಕಥೆಯೆಂದೆನೆ?ಕಥನ
ಕಾವ್ಯ ಕಥನ.
ಒಂದಾನೊಂದು ಕಾಲದಲ್ಲಿ
ಒಂದು ರಾಜ್ಯ,ಒಬ್ಬ ರಾಜ.
ರಾಜ ಆಳಿದ,
ಆಳು,ಕಾಳು,ಮಡದಿಯರೊಂದಿಗೆ.
ಕೈ-ಕಾಲು ಆಡದಂತಾಗೆ
"ಅನ್ಯಥಾ ಶರಣಂ ನಾಸ್ತಿ"
ಕಾಡಿಗೆ ಹೊರಟ.
ರಾಜ,ರಾಜ್ಯಕ್ಕೊಂದ ದಿಕ್ಕ
ತೋರಬೇಕಲ್ಲವೇ?
ದಿಕ್ಕು - ಮೊದಲ ಮಡದಿಯ
ಮೊದಲ ಮಗ ,ರಾಜಕುಮಾರ.
ಪಟ್ಟ-ಅಭಿಷೇಕ..
ರಾಜಕುಮಾರ,ರಾಜನಾದ.
ಆಳತೊಡಗಿದ...!!

ರಾಜ್ಯದಲಿ ದಂಗೆ,
ಬರ,ಹಾ-ಹಾ ಕಾರ!!
ಬೊಕ್ಕಸದಲ್ಲೊ ಬೊಗಸೆ ಮಣ್ಣು.
ರಾಜ ಅದುರಿದ,
ಮಂತ್ರಿಗಳ ಕರೆಸಿ
ದಾರಿಯೊಂದ ಹುಡುಕಿರೆಂದ.
ಚತುರನು, ಒಬ್ಬ ಮಂತ್ರಿಯು
ನಮ್ಮ ಸೈನ್ಯ ಬಲವು,
ನಿಮ್ಮ ಪರಾ-ಕ್ರಮವು!
ನೆರೆ ರಾಜ್ಯವ ಗೆಲ್ವುದು,
ಬೊಕ್ಕಸವ ತುಂಬುವುದು,
ಎನೆ..,
ರಾಜ ಹರುಷ-ರೋಷದಿ
"ಯಾರಲ್ಲಿ ಸೇನಾಧಿಪತಿಯ
ಕರೆಸಿರಿಲ್ಲಿ" ಚಪ್ಪಾಳೆ ತಟ್ಟಿದ.
ಸೇನಾ-ಅಧಿಪತಿ ತರಗುಟ್ಟಿದ
"ಕೂಡದು ಮಹಾಪ್ರಭು,
ಸೇನೆಯಲ್ಲಿ ಹುರುಪಿಲ್ಲ,
ಅಶ್ವ,ಕರಿಗಳಿಗೆ ಮೇವಿಲ್ಲ,
ಈ ಸಮಯದಿ ಯುದ್ಧವು ತರವಲ್ಲ".
ರಾಜ್ಯವನಾಳ್ವುದು,ಜನಹಿತವು
ನಮ್ಮದಲ್ಲವೇ ಹೆಗಲ ಹೊರೆ
ಹೇಳುವುದು ಅನುಸರಿಸುವುದಲ್ಲವೇ
ನಿಮ್ಮ ಹೊಣೆ
ಸಜ್ಜಾಗಲಿ...
ಮುಂದಿನ ಹುಣ್ಣಿಮೆಗೆ,
ಆಕ್ರಮಣವಾಗಲಿ!!
ರಾಜನಾಜ್ನೆ..ಶಿರಸಾ-ವಹಿಸಿ
ಸೇನೆ ಸಜ್ಜುಗೊಳಿಸಿ
ಮನದೆ ದುಖಃ ಉಮ್ಮಳಿಸಿ,
ಮಡದಿಯೊಡನೆ ನುಡಿದ
"ಕೇಡುಗಾಲವಿದು..
ನಮಗಿನ್ನು ಉಳಿವಿಲ್ಲ..!!,
ರಾಜನಿಗೆನೋ ಮಂಕು,
ತಿರುಗಿ ಬಾರೆನೆಂಬ ಶಂಕೆ!!
ಅಳುಕದಿರು,ಮಕ್ಕಳ ಬಾಳ್ವೆಗೆ
ದಾರಿ ತೋರುವಂತಾಗು"
ಬಿಕ್ಕಳಿಸಿದ...ಸೇನಾ-ಅಧಿಪತಿ.
ಪರಾಕ್ರಮಿ,ಎಂಟೆದೆ ಭಂಟನು
ನನ್ನ ಪ್ರಾಣೇಶ್ವರನು..
ಬಿಕ್ಕಳಿಸಿ ಅಳುವುದೇ..?
"ಹೆದರದಿರಿ,ದೇವನಿರುವುನು,
ಎಂದಿನಂತೆ ಪೊರೆವನು.."
ಮರುಗಿದಳು....
ತುಪ್ಪ ದೀಪವ ಹಚ್ಚಿ ಮಲಗಿದಳು.

ಬಂದಿತು ಹುಣ್ಣಿಮೆ ಎಂದಿನಂತೆ
ನೂರು,ಸಾವಿರ ಆನೆ ಕುದುರೆ
ಮುಂದೆ,ಮುಂದೆ...
ನಡೆದರ್ ಹಿಂದೆ ಕಾಲಾಳು.
ಡೇರೆ ಹಾಕಿದ್ದ,ರಾಜ..
ಹತ್ತು ಮೈಲಿ ದೂರಕ್ಕೆ.

ಸೇನೆಯ ಹುರಿದುಂಬುತ..
ವೀರಾವೇಶದಿ ಕೂಗಿದ..
ಎಂಟೆದೆಯ ಭಂಟ..
"ಸಹೋದರರೇ...
ನಲುಗುತಿರುವಳು ತಾಯಿ,
ಮಾತೄಭೂಮಿಯ ಋಣವಿದು,
ಗೆಲುವು,ಇಲ್ಲ ಸಾವು
ಜೀವ ತೇಯುತಿರುವ ದೊರೆಯು
ನಮಗಾಗಿ,ನಮ್ಮವರಿಗಾಗಿ
ಇದುವೇ ಸದವಕಾಶವು..
ನುಗ್ಗಿರಿ..ಮುನ್ನುಗ್ಗಿರಿ...!!
ಉಸಿರ ಕೊನೆಯವರೆಗೆ ಹೋರಾಡಿರಿ"
ಉಗುಳ ನುಂಗಿದ.

ಘಂಟೆಗೊಮ್ಮೆ ಸುದ್ದಿ ಕೇಳುತ
ರಾಜ ಕುಳಿತ ಮಂತ್ರಿಯೊಡನೆ,
ಸಮ-ಅಲೋಚಿಸುತ..!!
ಉರುಳಿದವು ತಲೆ
ಹರಿಯಿತು ರಕ್ತ ನಾಲೆ,
ಸೂರ್ಯ ಮುಳುಗುವಲ್ಲಿ
ಮುಳುಗಿತು ಸೇನೆ.
ಅಳಿದು-ಉಳಿದವು
ತಪ್ಪಿಸಿಕೊಳ್ಳುತ್ತಿದ್ದವು
ಹದ್ದು,ನಾಯಿ,ಮೃಗಗಳ.
ಹೊತ್ತು ಮುಳುಗಿದಂತೆ
ಸುದ್ದಿ ಬಂತು..
ಸೇನಾಧಿಪತಿ ಇನ್ನಿಲ್ಲ,
ಸೈನ್ಯದಲಿ ಇನ್ನೇನೂ ಉಳಿದಿಲ್ಲ.
ವಿಷಮ ಪರಿಸ್ಥಿತಿ..
ತೀವ್ರ ಸಮಾಲೋಚಿಸಿ,
ರಾಜ ಸಂಧಿಗೊಪ್ಪಿದ.
ನೆರೆರಾಜ್ಯದೊಂದಿಗೆ
ಸಂಧಾನವ ಮಾಡಿದ.
ಯುದ್ಧದ ಹಾನಿಯಿಂದ ಕುಪಿತನು,
ಬರದ ದಾಳಿಯಿಂದ ಪೀಡಿತನೂ,
ನೆರೆರಾಜ್ಯದ ರಾಜ..
ಅಪಾರ ಹೊನ್ನು,ವರಹ
ಕಪ್ಪವಾಗಿ ಸಲ್ಲಿಸೆಂದ.

ರಾಜ ಆಜ್ನೆ ಹೊರಡಿಸಿದ
"ರಾಜ್ಯದ ಹಿತಕೆ,
ಮಾತೃಭೂಮಿಯ ಸೇವೆಗೆ
ಇರುವುದೆಲ್ಲವ ನೀಡಿರೆಂದು...."!!

ಜಯಂತಬಾಬು.

2 comments:

chethan said...

ಅರ್ಥಪೂರ್ಣವಾಗಿದೆ. ಪ್ರಸ್ತುತಿ ಚೆನ್ನಾಗಿದೆ.

ಜಯಂತ್ said...

ಧನ್ಯವಾದಗಳು ಚೇತನ್..